ಎಸ್..ಕೆ. ಭಗವಾನ್ (ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧ. ಇವರಿಬ್ಬರೂ ಸೇರಿ ೫೫ ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಅವರು ೨೪ ಕಾದಂಬರಿಗಳನ್ನು ಸಿನೆಮಾಗೆ ಅಳವಡಿಸಿದ್ದಾರೆ. ಪ್ರಸ್ತುತ ಅವರು ’ಆದರ್ಶ ಸಿನೆಮಾ ಇನ್ಸ್ಟಿಟ್ಯೂಟ್‍ನ’ ಪ್ರಾಂಶುಪಾಲರಾಗಿದ್ದಾರೆ. ಸಿನೆಮಾ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದಾರೆ. == ಜೀವನ == ಎಸ್.ಕೆ. ಭಗವಾನ್ ಅವರು ೧೯೩೩ರ ಫೆಬ್ರುವರಿ ೨೦ ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಬೆಂಗಳೂರು ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಯುವಕರಾಗಿದ್ದಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ೧೯೫೬ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನೆಮಾ ಜೀವನ ಆರಂಭಿಸಿದರು. ೨೦ನೇ ಫೆಬ್ರವರಿ ೨೦೨೩ ರಂದು ಮುಂಜಾನೆ ೬ಗಂಟೆ ೧೦ ನಿಮಿಷಕ್ಕೆ ಅವರ ೯೦ನೇ ವರ್ಷದಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮರಣ ಹೊಂದಿದರು. ಕಾಕತಾಳೀಯವೆಂಬಂತೆ ಭಗವಾನರ ಜನ್ಮದಿನ (ಫೆಬ್ರವರಿ ೨೦, ೧೯೩೩), ಇಹಲೋಕ ತ್ಯಜಿಸಿದ ದಿನ (ಫೆಬ್ರವರಿ ೨೦. ೨೦೨೩) ಮತ್ತು ಅವರ ಜೊತೆಗಾರ ದೊರೈರಾಜ್ ಅವರು ಇಹಲೋಕ ತ್ಯಜಿಸಿದ (ಫೆಬ್ರವರಿ ೨೦, ೨೦೦೦) ದಿನಾಂಕ ಮತ್ತು ತಿಂಗಳು ಒಂದೇ ಆಗಿವೆ. == ಸಿನಿಮಾ ರಂಗದಲ್ಲಿ == ೧೯೬೬ರಲ್ಲಿ ಎಂ.ಸಿ. ನರಸಿಂಹಮೂರ್ತಿಯವರೊಡಗೂಡಿ ಸಂಧ್ಯಾರಾಗ ಸಿನೆಮಾ ನಿರ್ದೇಶಿಸಿದರು. ನಂತರ ದೊರೈ-ಭಗವಾನ್ ಜೋಡಿಯು ರಾಜಕುಮಾರ್ ನಾಯಕನಟನಾಗಿರುವ ’ಜೇಡರ ಬಲೆ’ ಚಿತ್ರವನ್ನು ನಿರ್ದೆಶಿಸಿತು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್‌ ಮಾದರಿಯ ಮೊದಲ ಚಿತ್ರವಾಗಿತ್ತು. ಮುಂದಿನ ಅವರ ಎಲ್ಲಾ ಚಿತ್ರಗಳನ್ನು ಈ ನಿರ್ದೇಶಕದ್ವಯರು ಜೋಡಿಯಾಗೇ ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸಬೆಳಕು’, ‘ಯಾರಿವನು’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದರು. ಇವರ ೩೨ ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವ ಹೊಂದಿದ್ದಾರೆ. ದೊರೈರಾಜರ ಮರಣದ ನಂತರ ಇವರು ನಿರ್ದೇಶನದಿಂದ ನಿವೃತ್ತಿ ಹೊಂದಿದರು. ೧೯೯೩ರ ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ. ಭಗವಾನರು ದೊರೈ ಅವರೊಂದಿಗೆ ಜೊತೆಯಾಗಿ ಸುಮಾರು ೫೦ಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದೊರೈ-ಭಗವಾನ್ ಜೋಡಿಯಾಗಿ ವಾಣಿ, ಭಾರತೀಸುತ, ತ.ರಾ.ಸು, ಚಿತ್ರಲೇಖ, ಟಿ.ಕೆ.ರಾಮರಾವ್, ಎನ್.ಪಂಕಜಾ ಮತ್ತು ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ ಕಾದಂಬರಿಗಳು ಸೇರಿದಂತೆ ೨೪ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿದೆ. ಆಡುವ ಗೊಂಬೆ (೨೦೧೮-೧೯) ಎಸ್. ಕೆ. ಭಗವಾನರು ನಿರ್ದೇಶಿಸಿದ ಕೊನೆಯ ಚಿತ್ರ. ೮೬ ನೇ ವಯಸ್ಸಿನಲ್ಲಿ ಚಿತ್ರ ನಿರ್ದೇಶಿಸುವ ಮೂಲಕ ಇವರು ಭಾರತದ ಅತ್ಯಂತ ಹಿರಿಯ ನಿರ್ದೇಶಕರೆನಿಸಿದ್ದಾರೆ. == ಸಿನೆಮಾ ಪಟ್ಟಿ == (ಇದು ಭಾಗಶಃ ಪಟ್ಟಿ. ಇದನ್ನು ವಿಸ್ತರಿಸಬಹುದು) == ಪ್ರಶಸ್ತಿಗಳು == ೨೦೧೭ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಕಾಡಮಿ ಪ್ರಶಸ್ತಿ ಕರ್ನಾಟಕ ಸರ್ಕಾರದಿಂದ ೧೯೯೫-೯೬ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ. ೨೦೧೦ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿ == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಎಸ್. ಕೆ. ಭಗವಾನ್ ಐ ಎಮ್ ಡಿ ಬಿನಲ್ಲಿ